Saturday 26 January 2008

ಅರಿವಿನ ಅಂತರಾಳ-ಮಾನವ ಜೀವನ ವೃತ್ತದ ಇನ್ನರ್ಧ ಭಾಗ

ಬರೆದವರು-ಸ್ವಾಮಿ ಜಗನಾತ್ಮಾನಂದ ಅರಿವಿನ ಅಂತರಾಳ
ಮಾನವ ಜೀವನದ ವೃತ್ತದ ಇನ್ನರ್ಧ ಭಾಗ

ಇತ್ತೀಚಿನ ಒಂದು ಗಣನೆಯ ಪ್ರಕಾರ ಅಮೇರಿಕಾ ದೇಶದಲ್ಲಿ ನೂರಕ್ಕೆ ಸುಮಾರು ಎಪ್ಪತ್ತೆರಡು ಮಂದಿ ಪುನರ್ಜನ್ಮ ಸಿದ್ಧಾಂತವನ್ನು ನಂಬತೊಡಗಿದ್ದಾರೆಂದು ಪುನರ್ಜನ್ಮಕ್ಕೆ ಸಂಬಂಧಿಸಿದ ನೂತನ ಗ್ರಂಥವನ್ನು ಬರೆದ ಸ್ಟೀವನ್ ರೋಷನ್ ಹೇಳುತ್ತಾರೆ. ಈ ನಂಬಿಕೆಗೆ ಕ್ರೈಸ್ತ ಧರ್ಮಾಧಿಕಾರಿಗಳ ಪ್ರಬಲ ವಿರೋಧವಿದ್ದರೂ ವಿಜ್ನಾನದ ವಿವಿಧ ಶಾಖೆಗಳ ಪರಿಚಯವೂ ಇರುವ ಬುದ್ಧಿಶಾಲಿಗಳಾದ ಜನರ ಒಲವು ಈ ಕಡೆ ತಿರುಗಲು ಕಾರಣವೇನಿರಬಹುದು ಎಂಬುದೀಗ ಪ್ರಶ್ನೆ. ಮನುಷ್ಯನ ಮನಸ್ಸಿನ ಆಳದ ಸ್ತರವನ್ನು ಕುರಿತ ದೀರ್ಘಕಾಲದ ಅಧ್ಯಯನದ ಫಲಿತಾಂಶಗಳೂ ತತ್ಸಂಬಂದವಾದ ವಿಫುಲ ಸಾಕ್ಶ್ಯಾಧಾರಗಳೂ ಈ ಪುರಾತನ ಸಿದ್ಧಾಂತದಲ್ಲಿ ನಂಬಿಕೆಯನ್ನು ಪುನಃ ಪ್ರತಿಷ್ಠಾಪಿಸಲು ಕಾರಣವಾಗಿರಬಹುದು. ಈ ಕುರಿತು ಒಂದು ಪುಟ್ಟ ಜಿಜ್ನಾಸೆ ಚಿಂತನೆ ಇಲ್ಲಿದೆ.

ನಾವು ಬದುಕು ಎಂದು ತಿಳಿದುಕೊಂಡಿರುವುದು ವೃತ್ತದ ಅರ್ಧ ಭಾಗ ಮಾತ್ರ. ಇನ್ನರ್ಧ ಭಾಗ ಬದುಕಿನ ಆಚೆಗೆ. ದೇಹಕ್ಕೆ ಅತೀವವಾದ ಅಸ್ತಿತ್ವದಲ್ಲಿ ಅಡಗಿಕೊಂಡಿದೆ. ಇದರ ಬಗೆಗೆ 'ಹೀಗೆ' ಎಂದು ನಿಶ್ಚಿತವಾಗಿ ಸಾಮಾನ್ಯರಾದ ನಮಗೇನೂ ತಿಳಿಯುವಂತಿಲ್ಲ. ನದಿ ಎಂದು ಹೇಳಿದಾಗ ನದಿಯ ಉಗಮ ಸ್ಥಾನ ಅದರ ಪಾತ್ರ. ಅದರ ಇಕ್ಕೆಲಗಳಲ್ಲಿರುವ ಕಟ್ಟಡಗಳು, ಪಟ್ಟಣಗಳು, ಅದು ಸೇರುವ ಸಮುದ್ರ ಇವು ನಮ್ಮ ಅರಿವಿಗೆ ನಿಲುಕುತ್ತವೆ. ಆದರೆ ಇದು ನದಿಯ ಪೂರ್ಣ ಸ್ವರೂಪ ಅಲ್ಲ. ನದಿಯ ಸ್ವರೂಪದ ಇನ್ನೊಂದು ಮುಖವಿದೆ. ಅದು ಸೂಕ್ಷ್ಮವಾದುದು.

ಸೂರ್ಯ ಕಿರಣಗಳು ಸಮುದ್ರದ ನೀರನ್ನು ಆವಿಯಾಗಿಸುತ್ತದೆ. ಗಾಳಿಯು ಅದನ್ನು ಪರ್ವತಾಗ್ರಕ್ಕೆ ಒಯ್ಯುತ್ತದೆ. ಅಲ್ಲಿ ಮಳೆಯಾಗಿ ಸುರಿದ ನೀರು ನದಿಯಲ್ಲಿ ಹರಿದು ತಿರುಗಿ ಸಮುದ್ರವನ್ನು ಸೇರುತ್ತದೆ. ಅಂತೆಯೇ ನಮ್ಮ ಜೀವನ ಪ್ರವಾಹದಲ್ಲೂ ಕಾಣುವ ಮತ್ತು ಕಾಣದ ಶಕ್ತಿಗಳು ಕೆಲಸ ಮಾಡುತ್ತವೆ. ಹುಟ್ಟಿ ಮೈದಳೆದ ವ್ಯಕ್ತಿ ಮರಣದ ಜವನಿಕೆ ಬೀಳುವವರೆಗಿನ ಜೀವನವನ್ನೇ ಸರ್ವಸ್ವ ಎಂದುಕೊಂಡಿರುತ್ತಾನೆ. ಆದರೆ ದೇಹವನ್ನು ಧರಿಸಿದ ಚೇತನ ದೇಹದೊಂದಿಗೆ ನಾಶವಾಗುವುದಿಲ್ಲ ಎಂಬ ಸಂಗತಿ ಕೆಲವರ ಪಾಲಿಗೆ ನಿಚ್ಚಳವಾಗಿ ತಿಳಿಯುತ್ತದೆ. ಈ ಸಂಗತಿಯನ್ನು ಅನುಭವಕ್ಕೆ ತಂದುಕೊಂಡವರ ಪಾಲಿಗೆ ದೇಹಾತೀತ ಅಸ್ತಿತ್ವ ಹಾಗೂ ಜೀವಾತ್ಮನ ಇರುವಿಕೆ ನಂಬಿಕೆ ಅಥವಾ ಕಲ್ಪನೆಯಲ್ಲ, ಅನುಭವ ಗಮ್ಯವಾದ ಸತ್ಯ. ಸಹಸ್ರಾರು ವರ್ಷಗಳ ಹಿಂದೆಯೇ ಮನುಷ್ಯನು ಕೇವಲ ಶರೀರ ಮಾತ್ರವಲ್ಲ 'ಶರೀರ ಧಾರಿ' ಎಂಬ ಸತ್ಯವು ಭಾರತೀಯ ಋಷಿಮುನಿಗಳಿಗೆ ತಿಳಿದಿತ್ತು. ಒಂದು ನಿಯಮವನ್ನನುಸರಿಸಿ ಜೀವಾತ್ಮನು ಈ ಜಗತ್ತಿಗೆ ಬಂದು ಹೋಗುತ್ತಾನೆಂಬುದನ್ನು ಆ ದ್ರ್‍ಅಷ್ಟ್ರಾರರು ತಿಳಿದಿದ್ದರು. ವಿಜ್ನಾನದ ನೂತನ ಸಂಶೋಧನೆಗಳ ಬೆಳಕಿನಲ್ಲಿ ಈ ವಿಚಾರಗಳ ಚಿಂತನ ಮಂಥನ ನಡೆಯುತ್ತಿದೆ. ಕಳೆದ ಒಂದು ಶತಮಾನದಿಂದ ಪಶ್ಚಿಮ ದೇಶಗಳಲ್ಲಿ ಈ ಬಗ್ಗೆ ಸಾಕಷ್ಟು ವಿಚಾರ ವಿಮರ್ಶೆ, ಪರೀಕ್ಷೆ ಪ್ರಯೋಗಗಳು ನಡೆದಿವೆ ಎಂಬುದು ನಮ್ಮಲ್ಲಿ ಹಲವರಿಗೆ ತಿಳಿದಿಲ್ಲ.

Friday 25 January 2008

ಅರಿವಿನ ಅಂತರಾಳ-ಕರ್ಮದ ಹೊರೆ

ಪ್ರಜಾವಾಣಿ ಇಂದ ಆರಿಸಿದ್ದು ಅರಿವಿನ ಅಂತರಾಳ
ಕರ್ಮದ ಹೊರೆ
ಮನುಷ್ಯನ ಅಸ್ತಿತ್ವವು ವಾಸ್ತವಿಕತೆಯಾಗುವುದು ಅವನ ಕರ್ಮಜೀವನದಿಂದ. ಒಂದು ಕರ್ಮವನ್ನು ಎಸಗದವನಲ್ಲಿ ಮಾನವೀಯ ಗುಣಗಳು ಎಷ್ಟೇ ಅಧಿಕವಿದ್ದರೂ ಅವನು ನೈಜ ಮನುಷ್ಯನಾಗುವುದಿಲ್ಲ. ಅದೊಂದು ಕಾಲ್ಪನಿಕ ಅಸ್ತಿತ್ವ ಮಾತ್ರ. ಪ್ರತಿಯೊಬ್ಬ ಮನುಷ್ಯನ ಅಸ್ತಿತ್ವವೂ ಅವನ ಚಟುವಟಿಕೆಗಳಾಗಿವೆ. ಅವುಗಳ ಗುಣಾವಗುಣಗಳನ್ನು ಅವಲಂಬಿಸಿಕೊಂಡು ಅವನ ಅಸ್ತಿತ್ವದ ಸೋಲು-ಗೆಲುವು ಇರುತ್ತದೆ. ಒಬ್ಬನ ಅಸ್ತಿತ್ವದ ಒಟ್ಟು ಮೊತ್ತವು ಅವನ ಕರ್ಮಲೋಕವಾಗಿದೆ. ಒಬ್ಬನ ಅಸ್ತಿತ್ವವನ್ನು ಇನ್ನೊಬ್ಬನಿಗೆ ವಹಿಸಿಕೊಳ್ಳಲು ಸಾಧ್ಯವಿಲ್ಲ. ಇಹಲೋಕದಲ್ಲೂ, ಪರಲೋಕದಲ್ಲೂ ವಸ್ತುಸ್ಠಿತಿ ಇದುವೇ ಆಗಿದೆ. ಆದರೆ ಇಹಲೋಕದಲ್ಲಿ ಕೆಲವರು ತಮ್ಮ ತಮ್ಮ ಭಾರವನ್ನು ಕೃತಕವಾಗಿ ಇತರರ ಮೇಲೆ ಹೇರಲು ಮತ್ತು ಇತರರ ಭಾರವನ್ನು ಹೊರಲು ಸಾಧ್ಯವಾಗಬಹುದು. ಇತರರು ಮಾಡಿದ ಸತ್ಕರ್ಮ ಅಥವಾ ದುಷ್ಕರ್ಮವನ್ನು ತಾನು ಮಾಡಿದ್ದೆಂದು ಹೇಳಲು ಮತ್ತು ಅದನ್ನು ಜನರು ನಂಬುವಂತೆ ಮಾಡಲು ಸಾಧ್ಯವಾಗಬಹುದು. ಇತರರ ತಪ್ಪಿಗೆ ಶಿಕ್ಷೆ ಅನುಭವಿಸಬಹುದು. ಇತರರ ಪುಣ್ಯಕ್ಕೆ ಪುರಸ್ಕಾರವನ್ನೂ ಪಡೆಯಬಹುದು. ಆದರೆ ಅದರಿಂದಾಗಿ ವಾಸ್ತವ ಜಗತ್ತಿನಲ್ಲಿ ಇತರರ ಕರ್ಮ ತನ್ನದಾಗದು. ತನ್ನ ಕರ್ಮವು ಇತರರದ್ದಾಗುವುದೂ ಅಸಾಧ್ಯ. ಇದನ್ನೇ ಪವಿತ್ರ ಕುರಾನ್ ಈ ರೀತಿ ಪ್ರತಿಪಾದಿಸಿದೆ.
ಯಾವ ಹೊರೆ ಹೊರುವಾತನೂ ಇನ್ನೊಬ್ಬನ ಹೊಣೆಯನ್ನು ಹೊರಲಾರನು. ಮನುಷ್ಯನ ಪಾಲಿಗೆ ಅವನು ಪರಿಶ್ರಮ ಪಟ್ಟದ್ದು ಮಾತ್ರವಿದೆ. ಅವನ ಪರಿಶ್ರಮವನ್ನು ಸಧ್ಯವೇ ಪರಿಶೀಲಿಸಲಾಗುವುದು. ತರುವಾಯ ಅವನ ಸಂಪೂರ್ಣ ಪ್ರತಿಫಲವನ್ನು ಕೊಡಲಾಗುವುದು.
ಮರಣಾನಂತರದ ಪರಲೋಕ ಜೀವನದಲ್ಲಿ ಈ ರೀತಿ ಕೃತಕವಾಗಿ ಅಸ್ತಿತ್ವಗಳನ್ನು ಬದಲಾಯಿಸಲಾಗದು. ಅವುಗಳ ರೂಪಾಂತರವೂ ಸಾಧ್ಯವಿಲ್ಲ. ಸತ್ತವನು ಪುನರುತ್ಥಾನಗೊಳ್ಳುವುದು ಸ್ವಂತ ಕರ್ಮಗಳ ವಾಸ್ತವಿಕತೆಗಳಂತಾಗಿರುವುದು. ಮುಖವಾಡಗಳು, ಆಡಂಬರಗಳಿಲ್ಲದೆ ಯಥಾರ್ಥ ರೂಪದ ಕರ್ಮಗಳ ಮುಂದೆ ಮನುಷ್ಯನು ನಿಂತಿರುವನು. ಈ ರೀತಿ ಕರ್ಮಗಳನ್ನು ಅಸಂದಿಗ್ಧವಾಗಿ ತಾನೇ ಗುರುತಿಸಿಕೊಂಡ ಬಳಿಕವೇ ಪ್ರತಿಯೊಬ್ಬ ವ್ಯಕ್ತಿಯ ಕರ್ಮ ಫಲವು ತೀರ್ಮಾನಗೊಳ್ಳುವುದು.
ಒಬ್ಬನ ಕರ್ಮದ ಭಾರವನ್ನು ಇನ್ನೊಬ್ಬನು ವಹಿಸಲು ಸಾಧ್ಯವಿಲ್ಲವೆಂಬುದು ಸಾಮಾನ್ಯ ಬುದ್ಧಿಗೆ ನಿಲುಕುವ ವಿಷಯ. ಉಚ್ಚರು, ಉನ್ನತರು, ಯಜಮಾನರು, ಪುರೋಹಿತರು, ಪುಣ್ಯ ಪುರುಷರು, ದೇವಚರರು, ಪ್ರವಾದಿಗಳು, ಸಂತರು ಯಾರೂ ಇತರರ ಭಾರವನ್ನು ವಹಿಸಲಾರರು. ವಶೀಲಿ, ಶಿಫಾರಸ್ಸು, ವರ್ಚಸ್ಸುಗಳ ಮೂಲಕ ಇನ್ನೊಬ್ಬನನ್ನು ಅವನ ಕರ್ಮಫಲವನ್ನು ಅನುಭವಿಸುವುದರಿಂದ ರಕ್ಷಿಸಲು ಸಾಧ್ಯವಿಲ್ಲ. ಇದು ಕುರಾನ್ ಪ್ರತಿಪಾದಿಸುವ ಕರ್ಮ ಫಲದ ಸಿದ್ಧಾಂತ. ಹಿಂದಿನ ಎಲ್ಲ ಧರ್ಮಗಳೂ ಅದನ್ನೇ ಪ್ರತಿಪಾದಿಸಿದ್ದವು ಎಂದು ಅದು ವಾದಿಸುತ್ತವೆ.
ಮನುಷ್ಯ ಒಂದು ನೈತಿಕ ಅಸ್ತಿತ್ವ, ಒಳಿತು-ಕೆಡುಕು ಪ್ರಜ್ನೆ ಅವನ ಅಂತರಾತ್ಮದಲ್ಲಿ ಲೀನವಾಗಿದೆ. ಅವನು ಮಾಡಿದ ಒಳಿತಿಗಾಗಲಿ, ಕೆಡುಕಿಗಾಗಲಿ ಅವನೇ ಜವಾಬ್ದಾರನಾಗಬೇಕಾದುದು ಬುದ್ಧಿಯ ಬೇಡಿಕೆ. ಬಿತ್ತಿದಂತೆ ಬೆಳೆ, ಮಾಡಿದ್ದುಣ್ಣೋ ಮಹರಾಯ ಎಂಬ ಗಾದೆಗಳ ತಾತ್ಪರ್ಯವೂ ಅದುವೇ. "ಅಣು ಗಾತ್ರದಷ್ಟು ಒಳಿತು ಮಾಡಿದವನು ಅದನ್ನು ಕಂಡೇ ತೀರುವನು. ಅಣು ಗಾತ್ರದಷ್ಟು ಕೆಡುಕು ಮಾಡಿದವನು ಅದನ್ನು ಕಂಡೇ ತೀರುವನು" ಎಂದು ಕುರಾನ್ ಪ್ರತಿಪಾದಿಸುತ್ತದೆ.
ಬರೆದವರು-ಸನ್ಮಾರ್ಗಿ

Thursday 17 January 2008

ಕರ್ಮದ ನೆಲೆ, ಬೆಲೆ

ಮನುಷ್ಯರು ಕಷ್ಟ, ಸಂಕಟಗಳ ಕೋಟಲೆಯಲ್ಲಿ ಸಿಕ್ಕಾಗ 'ಅಯ್ಯೋ, ನಾನೇನು ತಪ್ಪು ಮಾಡಿದ್ದೆ? ನನಗೇಕೆ ಹೀಗಾಯಿತು?' ಎನ್ನುವುದುಂಟು. ಮನುಷ್ಯರಿಗೆ ಬರುವ ದುಃಖ ಸಂಕಟಗಳೂ, ನೋವು ನರಳಾಟಗಳೂ ಅವರು ಮಾಡಿದ್ದ ತಪ್ಪುಗಳಿಂದ ಅಥವಾ ಪಾಪಕೃತ್ಯಗಳಿಂದ ಉಂಟಾಗುವಂಥದು ಎನ್ನುವ ನಂಬಿಕೆಯು. ವೈಜ್ನಾನಿಕ ವಿಚಾರಧಾರೆಯ ಬೆಳಕಿನಲ್ಲಿ ಬೆಳೆದವರಿಗೆ 'ಗತಿಸಿಹೋದ ಗೊಡ್ಡು ಧರ್ಮದ ಮೂಢನಂಬಿಕೆ ' ಎಂದೆಲ್ಲ ಅನಿಸಬಹುದು. ಆದರೆ ಕೇಸೀಯ ಅಸಂಖ್ಯ ಹೇಳಿಕೆಗಳಲ್ಲಿ ದುಃಖಕ್ಕೂ, ಪಾಪಕೃತ್ಯ್ಗಳಿಗೂ ಕಾರ್ಯಕಾರಣ ಸಂಬಂಧವಿದೆ. ಮಾಡಿದ ಪಾಪದ ಮೂಲವಾದರೋ ಸಾಮಾನ್ಯ ದೃಷ್ಟಿಗೆ ಅಥವಾ ಸಾಮಾನ್ಯ ಮನಸ್ಸಿನ ಜಾಗೃತ ಪರಿಧಿಗೆ ನಿಲುಕದಂಥದ್ದು. ಅಗೋಚರವಾದುದು ಅಷ್ಟೆ.

ಪಾಪ ಮತ್ತು ದುಃಖಗಳ ಕಾರ್ಯಕಾರಣಗಳನ್ನು ತಿಳಿಸುವ ಏಕೈಕ ಪದವೇ ಕರ್ಮ.