Saturday 26 January 2008

ಅರಿವಿನ ಅಂತರಾಳ-ಮಾನವ ಜೀವನ ವೃತ್ತದ ಇನ್ನರ್ಧ ಭಾಗ

ಬರೆದವರು-ಸ್ವಾಮಿ ಜಗನಾತ್ಮಾನಂದ ಅರಿವಿನ ಅಂತರಾಳ
ಮಾನವ ಜೀವನದ ವೃತ್ತದ ಇನ್ನರ್ಧ ಭಾಗ

ಇತ್ತೀಚಿನ ಒಂದು ಗಣನೆಯ ಪ್ರಕಾರ ಅಮೇರಿಕಾ ದೇಶದಲ್ಲಿ ನೂರಕ್ಕೆ ಸುಮಾರು ಎಪ್ಪತ್ತೆರಡು ಮಂದಿ ಪುನರ್ಜನ್ಮ ಸಿದ್ಧಾಂತವನ್ನು ನಂಬತೊಡಗಿದ್ದಾರೆಂದು ಪುನರ್ಜನ್ಮಕ್ಕೆ ಸಂಬಂಧಿಸಿದ ನೂತನ ಗ್ರಂಥವನ್ನು ಬರೆದ ಸ್ಟೀವನ್ ರೋಷನ್ ಹೇಳುತ್ತಾರೆ. ಈ ನಂಬಿಕೆಗೆ ಕ್ರೈಸ್ತ ಧರ್ಮಾಧಿಕಾರಿಗಳ ಪ್ರಬಲ ವಿರೋಧವಿದ್ದರೂ ವಿಜ್ನಾನದ ವಿವಿಧ ಶಾಖೆಗಳ ಪರಿಚಯವೂ ಇರುವ ಬುದ್ಧಿಶಾಲಿಗಳಾದ ಜನರ ಒಲವು ಈ ಕಡೆ ತಿರುಗಲು ಕಾರಣವೇನಿರಬಹುದು ಎಂಬುದೀಗ ಪ್ರಶ್ನೆ. ಮನುಷ್ಯನ ಮನಸ್ಸಿನ ಆಳದ ಸ್ತರವನ್ನು ಕುರಿತ ದೀರ್ಘಕಾಲದ ಅಧ್ಯಯನದ ಫಲಿತಾಂಶಗಳೂ ತತ್ಸಂಬಂದವಾದ ವಿಫುಲ ಸಾಕ್ಶ್ಯಾಧಾರಗಳೂ ಈ ಪುರಾತನ ಸಿದ್ಧಾಂತದಲ್ಲಿ ನಂಬಿಕೆಯನ್ನು ಪುನಃ ಪ್ರತಿಷ್ಠಾಪಿಸಲು ಕಾರಣವಾಗಿರಬಹುದು. ಈ ಕುರಿತು ಒಂದು ಪುಟ್ಟ ಜಿಜ್ನಾಸೆ ಚಿಂತನೆ ಇಲ್ಲಿದೆ.

ನಾವು ಬದುಕು ಎಂದು ತಿಳಿದುಕೊಂಡಿರುವುದು ವೃತ್ತದ ಅರ್ಧ ಭಾಗ ಮಾತ್ರ. ಇನ್ನರ್ಧ ಭಾಗ ಬದುಕಿನ ಆಚೆಗೆ. ದೇಹಕ್ಕೆ ಅತೀವವಾದ ಅಸ್ತಿತ್ವದಲ್ಲಿ ಅಡಗಿಕೊಂಡಿದೆ. ಇದರ ಬಗೆಗೆ 'ಹೀಗೆ' ಎಂದು ನಿಶ್ಚಿತವಾಗಿ ಸಾಮಾನ್ಯರಾದ ನಮಗೇನೂ ತಿಳಿಯುವಂತಿಲ್ಲ. ನದಿ ಎಂದು ಹೇಳಿದಾಗ ನದಿಯ ಉಗಮ ಸ್ಥಾನ ಅದರ ಪಾತ್ರ. ಅದರ ಇಕ್ಕೆಲಗಳಲ್ಲಿರುವ ಕಟ್ಟಡಗಳು, ಪಟ್ಟಣಗಳು, ಅದು ಸೇರುವ ಸಮುದ್ರ ಇವು ನಮ್ಮ ಅರಿವಿಗೆ ನಿಲುಕುತ್ತವೆ. ಆದರೆ ಇದು ನದಿಯ ಪೂರ್ಣ ಸ್ವರೂಪ ಅಲ್ಲ. ನದಿಯ ಸ್ವರೂಪದ ಇನ್ನೊಂದು ಮುಖವಿದೆ. ಅದು ಸೂಕ್ಷ್ಮವಾದುದು.

ಸೂರ್ಯ ಕಿರಣಗಳು ಸಮುದ್ರದ ನೀರನ್ನು ಆವಿಯಾಗಿಸುತ್ತದೆ. ಗಾಳಿಯು ಅದನ್ನು ಪರ್ವತಾಗ್ರಕ್ಕೆ ಒಯ್ಯುತ್ತದೆ. ಅಲ್ಲಿ ಮಳೆಯಾಗಿ ಸುರಿದ ನೀರು ನದಿಯಲ್ಲಿ ಹರಿದು ತಿರುಗಿ ಸಮುದ್ರವನ್ನು ಸೇರುತ್ತದೆ. ಅಂತೆಯೇ ನಮ್ಮ ಜೀವನ ಪ್ರವಾಹದಲ್ಲೂ ಕಾಣುವ ಮತ್ತು ಕಾಣದ ಶಕ್ತಿಗಳು ಕೆಲಸ ಮಾಡುತ್ತವೆ. ಹುಟ್ಟಿ ಮೈದಳೆದ ವ್ಯಕ್ತಿ ಮರಣದ ಜವನಿಕೆ ಬೀಳುವವರೆಗಿನ ಜೀವನವನ್ನೇ ಸರ್ವಸ್ವ ಎಂದುಕೊಂಡಿರುತ್ತಾನೆ. ಆದರೆ ದೇಹವನ್ನು ಧರಿಸಿದ ಚೇತನ ದೇಹದೊಂದಿಗೆ ನಾಶವಾಗುವುದಿಲ್ಲ ಎಂಬ ಸಂಗತಿ ಕೆಲವರ ಪಾಲಿಗೆ ನಿಚ್ಚಳವಾಗಿ ತಿಳಿಯುತ್ತದೆ. ಈ ಸಂಗತಿಯನ್ನು ಅನುಭವಕ್ಕೆ ತಂದುಕೊಂಡವರ ಪಾಲಿಗೆ ದೇಹಾತೀತ ಅಸ್ತಿತ್ವ ಹಾಗೂ ಜೀವಾತ್ಮನ ಇರುವಿಕೆ ನಂಬಿಕೆ ಅಥವಾ ಕಲ್ಪನೆಯಲ್ಲ, ಅನುಭವ ಗಮ್ಯವಾದ ಸತ್ಯ. ಸಹಸ್ರಾರು ವರ್ಷಗಳ ಹಿಂದೆಯೇ ಮನುಷ್ಯನು ಕೇವಲ ಶರೀರ ಮಾತ್ರವಲ್ಲ 'ಶರೀರ ಧಾರಿ' ಎಂಬ ಸತ್ಯವು ಭಾರತೀಯ ಋಷಿಮುನಿಗಳಿಗೆ ತಿಳಿದಿತ್ತು. ಒಂದು ನಿಯಮವನ್ನನುಸರಿಸಿ ಜೀವಾತ್ಮನು ಈ ಜಗತ್ತಿಗೆ ಬಂದು ಹೋಗುತ್ತಾನೆಂಬುದನ್ನು ಆ ದ್ರ್‍ಅಷ್ಟ್ರಾರರು ತಿಳಿದಿದ್ದರು. ವಿಜ್ನಾನದ ನೂತನ ಸಂಶೋಧನೆಗಳ ಬೆಳಕಿನಲ್ಲಿ ಈ ವಿಚಾರಗಳ ಚಿಂತನ ಮಂಥನ ನಡೆಯುತ್ತಿದೆ. ಕಳೆದ ಒಂದು ಶತಮಾನದಿಂದ ಪಶ್ಚಿಮ ದೇಶಗಳಲ್ಲಿ ಈ ಬಗ್ಗೆ ಸಾಕಷ್ಟು ವಿಚಾರ ವಿಮರ್ಶೆ, ಪರೀಕ್ಷೆ ಪ್ರಯೋಗಗಳು ನಡೆದಿವೆ ಎಂಬುದು ನಮ್ಮಲ್ಲಿ ಹಲವರಿಗೆ ತಿಳಿದಿಲ್ಲ.